ಭಾರತದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ 3 ಯಶಸ್ವಿಯಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಚಿಮ್ಮಿದ ಚಂದ್ರಯಾನ ನೌಕೆಯು ಯಶಸ್ವಿಯಾಗಿ ನಿಗದಿತ ಕಕ್ಷೆ ಸೇರಿದೆ.
ಚಂದ್ರಯಾನ 3 ಮಿಷನ್ ಸಂಪೂರ್ಣವಾದರೆ ನಿಯಂತ್ರಿತ ಲ್ಯಾಂಡಿಂಗ್ ಮಾಡಿದ 4ನೇ ದೇಶ ಎಂಬ ಹಿರಿಮೆಗೆ ಭಾರತ ಭಾಜನವಾಗಲಿದೆ. ಇದು ಬಾಹ್ಯಾಕಾಶ ಕ್ಷೇತ್ರದಲ್ಲಿ ಅತ್ಯಂತ ಮಹತ್ವದ ಮೈಲುಗಲ್ಲಾಗಲಿದೆ.
ಫ್ಯಾಟ್ ಬಾಯ್ ಎಂಬ ಹೆಸರಿನ ರಾಕೆಟ್‌ನ ಗಗನನೌಕೆಯೇ ಚಂದ್ರಯಾನ 3 ಗಗನನೌಕೆ ಹೊತ್ತು ಸಾಗಿರುವ ವಾಹಕ. ಬರೋಬ್ಬರಿ 40 ದಿನಗಳ ನಂತರ ಚಂದ್ರನ ಅಂಗಳಕ್ಕೆ ಈ ನೌಕೆಯಲ್ಲಿರುವ ಲ್ಯಾಂಡರ್ ಇಳಿಯಲಿದೆ. ಆ ನಂತರ ರೋವರ್ ತನ್ನ ಕೆಲಸ ಶುರು ಮಾಡಲಿದೆ.
ಸದ್ಯ ಇಡೀ ವಿಶ್ವದ ಗಮನ ಸೆಳೆದಿರುವ ಚಂದ್ರಯಾನ 3 ರ ಹಿಂದೆ ಚಂದ್ರಯಾನ 2 ವೈಫಲ್ಯದ ಬೇಸರವಿದೆ. ಆದರೆ ಈ ಬಾರಿ 978 ಕೋಟಿ ವೆಚ್ಚದಲ್ಲಿ ಕೈಗೊಂಡ ಚಂದ್ರಯಾನ 3 ಪ್ರಯತ್ನ ಫಲಿಸುವ ಕಾತುರ, ನಿರೀಕ್ಷೆ ವಿಜ್ಞಾನಿಗಳದ್ದಾಗಿದೆ.