ನಿಕೋಲಾ ಟೆಸ್ಲಾ

0
676

ಗುರುಗಣೇಶ್ ಅವರಿಂದ

ನಿಮ್ಮ‌ ಸ್ಮಾರ್ಟ್‌ಫೋನ್‌ನಲ್ಲಿ ಕಳಿಸಿದ ಹಾಯ್ ಮೆಸೇಜೊಂದು ಊರು ರಾಜ್ಯ ದೇಶಗಳನ್ನು ಹಾರಿ ಸೆಕೆಂಡು ಕಳೆಯೋದ್ರಲ್ಲಿ ವಿದೇಶದಲ್ಲಿರೋ ನಿಮ್ಮ ಗೆಳೆಯನ ಚಾಟ್ ಬಾಕ್ಸಲ್ಲಿ ಹಾಜರಾಗುತ್ತೆ. ಸ್ವಿಚ್ ಅದುಮಿ ಮುಗಿಯೋ‌ ಮುನ್ನ ಬಲ್ಬ್ ಉರಿಯುತ್ತೆ, ರಿಮೋಟಲ್ಲಿ ಸೋಫಾ ಮೇಲೆ ಕುಳಿತೇ ಎಸಿ, ಟಿವಿ ಆನ್ ಮಾಡ್ತೀರಿ..ಇದಕ್ಕೆಲ್ಲ ಕಾರಣ ಇಡೀ ಜಗತ್ತು ಮರೆತ, ಆದ್ರೆ ಪ್ರತಿಯೊಬ್ನೂ ಮರೆಯಲೇಬಾರದ ಆ ವ್ಯಕ್ತಿ!

ಕ್ಷಣ ಕ್ಷಣಕ್ಕೂ ಗಾಳಿಗಿಂತ ಫಾಸ್ಟ್ ಆಗಿ ಓಡ್ತಿರೋ ನಮ್ಮ ಲೈಫ್ ಇಷ್ಟು ಸ್ಪೀಡ್ ಆಗೋದ್ರ ಹಿಂದೆ ಯಾರೆಲ್ಲ ಇದ್ದಾರೆ ಅಂತ ಒಮ್ಮೆಯಾದ್ರೂ ನೀವು ಯೋಚನೆ ಮಾಡಿದ್ದೀರಾ? ನಮ್ಮ ಮನೆ ಆಫೀಸಲ್ಲಿ ಬಳಸುತ್ತಿರೋ ಪ್ರತಿಯೊಂದು ಎಲೆಕ್ಟ್ರಿಕ್ ವಸ್ತುಗಳ ಹಿಂದೆ ಇರೋ ಆ ಅಸಾಧಾರಣ ಮೆದುಳು ಯಾರದ್ದು ಎಂಬ ಸಖತ್ ಕುತೂಹಲದ ಹಿಂದೆ ಅಸಾಮಾನ್ಯ ವ್ಯಕ್ತಿಯೊಬ್ರು ಇಡೀ ಜೀವನವನ್ನೇ ಸವೆಸಿದ್ರು ಅಂತ ಗೊತ್ತಾದ್ರೆ ನೀವು ಖಂಡಿತ ಮೂಗಿನ ಮೇಲೆ ಬೆರಳಿಡ್ತೀರ!

ಯೆಸ್! ಮುಂದೊಂದ್ ದಿನ ಜನರು ದೇಶ ಖಂಡಗಳನ್ನು ಮೀರಿ ತಮ್ಮ ಪಾಡಿಗೆ ತಾವು ಸಂವಹನ ಮಾಡ್ತಾರೆ. ಲೆಕ್ಕ ಮಾಡುವ ಪೆಟ್ಟಿಗೆಗಳನ್ನ ಬ್ಯಾಗ್‌ನಲ್ಲಿಟ್ಟು ಬೇಕಾದ ಕಡೆ ಕೊಂಡೊಯ್ತಾರೆ. ಕುಳಿತಲ್ಲೇ ಕುಳಿತು ಯಂತ್ರಗಳನ್ನ ಚಿಕ್ಕ ರಿಮೋಟ್ ಮೂಲಕ ಕಂಟ್ರೋಲ್ ಮಾಡ್ತಾರೆ ಅಂತ ಎರಡು ಶತಮಮಾನಕ್ಕೂ ಮೊದ್ಲೇ ಯೋಚ್ನೆ ಮಾಡಿದ್ದ ಆ ಮಹಾನುಭಾವ ನಿಕೋಲಾ ಟೆಸ್ಲಾ! ಈ ವ್ಯಕ್ತಿ ಒಂದಲ್ಲ ಎರಡಲ್ಲ, ಬರೋಬ್ಬರಿ 300 ಕ್ಕೂ ಹೆಚ್ಚು ಅನ್ವೇಷಣೆಗಳಿಗೆ ಪೇಟೆಂಟ್ ಪಡೆದಿದ್ರು ನಂಬಲಿಕ್ಕೆ ಸುಲಭ ಅಲ್ದಿದ್ರೂ ನಿಜವಾದ ವಿಷ್ಯ.

ಇಸವಿ ಸನ್ 1856 ರಲ್ಲಿ ಆಸ್ಟ್ರಿಯಾದಲ್ಲಿ ಹುಟ್ಟಿದ್ರು ನಿಕೋಲಾ ಟೆಸ್ಲಾ. ಅಪ್ಪ ಚರ್ಚ್ ಒಂದ್ರಲ್ಲಿ ಫಾದರ್. ಅಮ್ಮ ಗೃಹಿಣಿ, ಆದ್ರೆ ಸಂಶೋಧನೆಗಳಲ್ಲಿ ಆಸಕ್ತಿ ಇತ್ತು. ಅಪ್ಪ ಧಾರ್ಮಿಕ ಶಿಕ್ಷಣ ಪಡೆಯೋಕೆ ಒತ್ತಡ ಹೇರಿದ್ರೂ ಚಿಕ್ಕಂದಿನಲ್ಲೇ ಬಗೆಬಗೆಯ ಕನಸು ಕಂಡಿದ್ದ ನಿಕೋಲಾ ಹಠ ಹಿಡಿದು ಎಂಜಿನಿಯರ್ ಆದ್ರು. ಮುಂದೆ ಅವರು ತಮ್ಮ ಕನಸಿನಂತೆ ಅದಾಗಲೇ ಖ್ಯಾತಿ ಪಡೆದ ಥಾಮಸ್ ಅಲ್ವಾ ಎಡಿಸನ್ ಅವರ ಕಂಪನಿಯಲ್ಲಿ ಕೆಲಸಕ್ಕೆ ಜರ್ಮನಿಗೆ ತೆರಳಿದ್ರು.

ಆಗೆಲ್ಲ ಡಿಸಿ ಕರೆಂಟ್ ಕಾಲ, ಅಂದ್ರೆ ಕರೆಂಟ್ ಎಲ್ಲಿ ಉತ್ಪಾದನೆ ಆಗುತ್ತೋ ಅಲ್ಲಿಂದ ದೂರ ಸಾಗಿಸೋಕೆ ಪರದಾಟ ಆಗ್ತಿತ್ತು. ಜೋಗದಲ್ಲಿ ಟರ್ಬೈನ್ ಹಾಕಿ ಕರೆಂಟ್ ಹುಟ್ಸಿದ್ರೆ ಅದನ್ನು ಹೆಚ್ಚೂ ಅಂದ್ರೆ ಶಿವಮೊಗ್ಗದ ಮನೆಗಳಿಗೆ ಮಾತ್ರ ತಲುಪಿಸಬಹುದು, ಬೆಂಗಳೂರಿಗೆ ಕರೆಂಟ್ ಬೇಕಂದ್ರೆ ಬೆಂಗ್ಳೂರಲ್ಲೇ ಎಲ್ಲಾದ್ರೂ ಕರೆಂಟ್ ಹುಟ್ಟಿಸ್ಬೇಕು. ಇದೆಂಥಾ ರಗಳೆ ಅಲ್ವಾ? ಈ ಸಮಸ್ಯೆಗೆ ಟೆಸ್ಲಾ ತಲೇಲಿ ಒಂದದ್ಭುತ ಐಡಿಯಾ ಇತ್ತು. ಅದೇ ಎಸಿ ಕರೆಂಟ್.

ಎಸಿ ಕರೆಂಟಲ್ಲಿ ನೀವು ಒಂದ್ಕಡೆಯಿಂದ ಇನ್ನೊಂದ್ಕಡೆ ಕರೆಂಟ್ ಸಾಗಾಟ ಮಾಡೋಕೆ ಸಾಧ್ಯವಿತ್ತು. ಆದ್ರೆ ಟೆಸ್ಲಾ ಕೆಲಸ ಮಾಡ್ತಿದ್ದಿದ್ದು ಡಿಸಿ ಕರೆಂಟ್ ಬ್ಯುಸಿನೆಸ್ ಮಾಡ್ತಿದ್ದ ಎಡಿಸನ್‌ ಕಂಪನಿಯಲ್ಲಿ. ವ್ಯವಹಾರಕ್ಕೆ ಕಲ್ಲು ಬೀಳುತ್ತೆ, ಲಾಸ್ ಆಗುತ್ತೆ ಅಂತ ಎಡಿಸನ್ ಟೆಸ್ಲಾನ ಈ ಐಡಿಯಾ ಒಪ್ಲಿಲ್ಲ. ಡಿಸಿ ಕರೆಂಟ್ ಬಗ್ಗೆ ಕೆಲಸ ಮಾಡ್ಕೊಂಡು ಹಣನೂ ಕೊಡ್ಲಿಲ್ಲ. ಸಿಟ್ ಬಂದು ಟೆಸ್ಲಾ ಎಡಿಸನ್ ಕಂಪನಿ ಕೆಲಸ ಬಿಟ್ರು. ಆದ್ರೆ ಎಡಿಸನ್‌ಗೆ ಸ್ಪರ್ಧೆ ಕೊಡ್ತಿದ್ದ ವೆಸ್ಟಿಂಗ್ ಹೌಸ್ ಎಂಬ ಉದ್ಯಮಿ ಟೆಸ್ಲಾರ ಐಡಿಯಾ ಗುರುತಿಸಿದ್ರು. ಸ್ವಂತ ಲ್ಯಾಬ್ ಮಾಡಿ, ಎಸಿ ಕರೆಂಟ್‌ಗೆ ಪೇಟೆಂಟ್‌ನ್ನೂ ಮಾಡ್ಕೊಟ್ರು. ಇದೇ ಮುಂದೆ ನಯಾಗರಾ ಜಲಪಾತದಲ್ಲಿ ಜಗತ್ತಿನ ಮೊದಲ ಎಸಿ ಜನರೇಟರ್ ಕರೆಂಟ್ ಉತ್ಪಾದನಾ ಕೇಂದ್ರ ಆರಂಭಕ್ಕೂ ನಾಂದಿ ಹಾಡ್ತು.

ಇಷ್ಟೆಲ್ಲದರ ಜೊತೆಗೆ ಜೆಪಿ ಮೋರ್ಗನ್ ಎಂಬ ಉದ್ಯಮಿಯೊಬ್ರ ಹಣದಲ್ಲಿ ಟೆಸ್ಲಾ ಕ್ರಾಂತಿಯನ್ನೇ ಉಂಟುಮಾಡಬಹುದಾದ ವೈರ್‌ಲೆಸ್ ಸಂವಹನದ ಬಗ್ಗೆ ಅನ್ವೇಷಣೆಗಿಳಿದಿದ್ರು. ಆದ್ರೆ ಮೋರ್ಗನ್ ತಮ್ಮ ಬಂಡವಾಳವನ್ನು ಹಿಂತೆಗೆದುಕೊಂಡ್ರು. ಟೆಸ್ಲಾರ ಲ್ಯಾಬ್‌ಗೆ ಬೆಂಕಿ ಬಿದ್ದು ಎಲ್ಲಾ ಆವಿಷ್ಕಾರಗಳು, ಪೇಂಟೆಂಟ್ ಸುಟ್ಟು ಹೋದ್ವು. ಟೆಸ್ಲಾ ಆಗ ಮಾಡ್ತಿದದ್ದು ಅದೆಂಥಾ ಸಂಶೋಧನೆ ಆಗಿತ್ತಂದ್ರೆ, ಇಂದು ನಾವು ನೀವು ಬಳಸ್ತಿರುವ ಸ್ಮಾರ್ಟ್‌ಫೋನ್-ಇಂಟರ್ನೆಟ್ ಇಷ್ಟು ಡೆವಲಪ್ ಆಗೋಕೆ ಟೆಸ್ಲಾರ ಆ ದಿನಗಳ ಕೆಲಸಗಳೇ ಸ್ಪೂರ್ತಿ ಆದವು. ದಿನಬಳಕೆಯ ಹತ್ತಾರು ಸಾಧನಗಳು ರಿಮೋಟಲ್ಲಿ ನಾವು ಹೇಳ್ದಂತೆ ಕೇಳೋಕೆ ನಿಕೋಲಾ ಟೆಸ್ಲಾ ಎಂಬ ಆ ಮಹಾಮೇಧಾವಿಯ ಭವಿಷ್ಯಗಳೇ ಕಾರಣ.

ಟೆಸ್ಲಾರ ಇಡೀ ಜೀವನ ಇಂಥಾ ಹತ್ತಾರು ಸಂಶೋಧನೆ- ಭವಿಷ್ಯದ ಐಡಿಯಾಗಳಲ್ಲೇ ಕಳೆದುಹೋಯ್ತು. ಜನರ ಬದುಕನ್ನ ಸುಲಭ ಮಾಡ್ಬೇಕು ಅನ್ನೋದೇ ಅವರ ಕನಸಾಗಿತ್ತು. ಹೆಂಡತಿ ಮಕ್ಕಳು ಸಂಬಂಧ ಬೆಳೆಸಲು ಅವರಲ್ಲಿ ಸಮಯ ಇರಲೇ ಇಲ್ಲ. ವಿಜ್ಞಾನಕ್ಕೆ ಅಷ್ಟು ತಮ್ಮನ್ನು ತಾವು ಅರ್ಪಿಸಿಕೊಂಡುಬಿಟ್ಟಿದ್ರು ನಿಕೋಲಾ ಟೆಸ್ಲಾ. ಇತ್ತ ಹೆಚ್ಚುತ್ತಿರುವ ವಯಸ್ಸು, ಲ್ಯಾಬ್‌ಗೆ ಬಿದ್ದ ಬೆಂಕಿ, ಆರ್ಥಿಕ ಮುಗಟ್ಟು ಎಲ್ಲಾ ಸೇರಿ ಟೆಸ್ಲಾರ ಮನಸ್ಸಿನ ಮೇಲೆ ಪರಿಣಾಮ ಬೀರ್ತಿತ್ತು. ಒಬ್ಬಂಟಿಯಾಗಿ
ಹೋಟೆಲ್ ಒಂದ್ರಲ್ಲಿ ವಾಸವಿದ್ದ ಶತಮಾನದ ಸಂಶೋಧಕ 1943 ರಲ್ಲಿ ಹೋಟೆಲ್ ಕೋಣೆಯಲ್ಲೇ ಅಸುನೀಗಿದ್ರು. ಅಲ್ಲಿಗೆ ಹೊಸ ಸಂಶೋಧನೆಗಳಿಗೇ ಜೀವ ತೇಯ್ದ ಸಾಧಕನ ಜೀವನ ಅಂತ್ಯವಾಗಿತ್ತು.

ಇಷ್ಟೆಲ್ಲ ಮಾಡಿದ್ರೂ, ಟೆಸ್ಲಾ ಅವ್ರಿಗೆ ನೋಬೆಲ್ ಅವಾರ್ಡ್ ಸಿಕ್ಕಿಲ್ಲ. ಟೆಸ್ಲಾರ ಐಡಿಯಾ ಬಳಸಿ ರೂಪಿಸಿದ ರೇಡಿಯೋ ಸಂಶೋಧನೆಯಿಂದ ಮಾರ್ಕೋನಿ ನೋಬೆಲ್ ಪಡೆದರು. ಎಡಿಸನ್ ಮತ್ತು ಟೆಸ್ಲಾಗೆ ಜಂಟಿ ನೋಬೆಲ್ ಘೋಷಣೆಯಾಗಿತ್ತು, ಆದ್ರೆ ಟೆಸ್ಲಾರೇ ನೋಬೆಲ್ ನಿರಾಕರಿಸಿದ್ರು ಎಂಬ ವದಂತಿಗಳೂ ಹರಿದಾಡಿತ್ತು. ಯಾವ ಗೌರವ, ಮನ್ನಣೆ ಅರಸಿ ಹೋಗದ ಜನಜೀವನದ ಗುಣಮಟ್ಟ ಹೆಚ್ಚಿಸಲೊಂದೇ ದುಡಿದ 300ಕ್ಕೂ ಹೆಚ್ಚು ಆವಿಷ್ಕಾರದ ಜನಕನ ಹೆಸರಲ್ಲಿ ಎಲಾನ್ ಮಸ್ಕ್ ಭವಿಷ್ಯದ ಟೆಸ್ಲಾ ಕಂಪನಿ ಶುರುಮಾಡಿದ್ರು! ಈ ಕಥೆ ಮುಂದಿನ ಎಪಿಸೋಡಲ್ಲಿ!

LEAVE A REPLY

Please enter your comment!
Please enter your name here